ಬೆಲೆ
ಅಗತ್ಯ ವಸ್ತುಗಳನ್ನು ಅಥವಾ ಸೇವೆಯನ್ನು ಪಡೆದುಕೊಳ್ಳಲು ತೆರಬೇಕಾದ ಸಮಾನವಸ್ತು; ಈಗಿನ ಹಣದ ರೂಪದಲ್ಲಿ ನಿಗದಿಯಾದದ್ದು. ಹಣವಿಲ್ಲದೆ ವಸ್ತುಗಳ ಬದಲಿಗೆ ವಸ್ತುಗಳನ್ನೇ (ಬಾರ್ಟರ್ ಪದ್ಧತಿ) ವಿನಿವiಯ ಮಾಡುತ್ತಿದ್ದ ಕಾಲದಲ್ಲೂ ಒಂದು ವಸ್ತುವಿನ ಬೆಲೆಯನ್ನು ಮತ್ತೊಂದು ವಸ್ತುವಿನ ಮೂಲಕವೇ ನಿರ್ಧರಿಸಲಾಗುತ್ತಿತ್ತು. ಮಾರುಕಟ್ಟೆಯಲ್ಲಿ ಸರಕುಗಳ ಅಥವಾ ಸೇವೆಗಳ ಬೆಲೆ ಅವುಗಳ ಬೇಡಿಕೆ ಮತ್ತು ನೀಡಿಕೆಗಳ ಮೇಲೆ ಅವಲಂಬಿತ, ಅನುಭೋಗಿಗಳ ಬಯಕೆಗಳು ಮತ್ತು ಅಗತ್ಯತೆಗಳು ಅಂತೆಯೇ ನೈಸರ್ಗಿಕ ಸಂಪನ್ಮೂಲಗಳು ಮತ್ತು ಇತರ ಉತ್ಪಾದನಾಂಗಗಳು ಬದಲಾದಂತೆ, ಸರಕು ಮತ್ತು ಸೇವೆಗಳ ಬೇಡಿಕೆ ಮತ್ತು ನೀಡಿಕೆಗಳೂ ಬದಲಾಗಿ ಅವುಗಳ ಬೆಲೆಗಳೂ ಬದಲಾಗುತ್ತವೆ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ಸರಕಿನ ಬೆಲೆ ಹೇಗೆ ನಿರ್ಧಾರವಾಗುತ್ತದೆ ಎನ್ನುವುದು ಬೆಲೆ ನಿರ್ಧಾರ ವಿಶ್ಲೇಷಣೆಯತ್ತ ನಮ್ಮ ಗಮನ ಸೆಳೆಯುತ್ತದೆ. ಮಾರುಕಟ್ಟೆಯ ಸ್ವರೂಪ ಬದಲಾದಂತೆ ಬೆಲೆ ನಿರ್ಧಾರಕ ಶಕ್ತಿಗಳೂ ಬದಲಾವಣೆಯಾಗುತ್ತವೆ. ಸಾಮಾನ್ಯವಾಗಿ ಸರಕುಗಳ ಬೇಡಿಕೆ ಅದರ ಬೆಲೆಯ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚು ಬೆಲೆಯಿದ್ದಷ್ಟೂ ಆ ವಸ್ತುವಿನ ಬೇಡಿಕೆ ಪ್ರಮಾಣ ಕಡಿಮೆ ಯಿರುತ್ತದೆ. ಹಾಗೆಯೇ ಸರಕುಗಳ ಬೆಲೆ ಕಡಿಮೆಯಿದ್ದರೆ ಅವುಗಳ ಬೇಡಿಕೆ ಪ್ರಮಾಣ ಹೆಚ್ಚಾಗಿರುತ್ತದೆ. ಬೆಲೆ ಮತ್ತು ಬೇಡಿಕೆ ಪ್ರಮಾಣದ ನಡುವಣ ಅಂತರ ಕಡಿಮೆಯಿರುತ್ತದೆ. ಬೆಲೆ ಮತ್ತು ಬೇಡಿಕೆ ಪ್ರಮಾಣದ ನಡುವಣ ಸಂಬಂಧವನ್ನು ಸೂಚಿಸುವ ಪಟ್ಟಿಯನ್ನು ಬೇಡಿಕೆಯ ಅನುಸೂಚಿ ಎಂದು ಹೇಳಬಹುದು. ಹಾಗೇ ಬೇಡಿಕೆ ಮತ್ತು ಬೆಲೆ ಸಂಬಂಧವನ್ನು ರೇಖಾ ಚಿತ್ರದ ಮೂಲಕ ಸೂಚಿಸಿದೆ. ಉದಾಹರಣೆಗೆ ರೇಖಾ ಚಿತ್ರದÀಲ್ಲಿ ಬೆಣ್ಣೆಯ ಬೆಲೆ ಮತ್ತು ಬೇಡಿಕೆಯನ್ನೂ ನಿರೂಪಿಸಿದೆ. 

ಚಿತ್ರ-1

	ಬೆಣ್ಣೆಯ ಬೇಡಿಕೆಯ ರೇಖೆ ಎಡದಿಂದ ಬಲಕ್ಕೆ ಕೆಳಗಿಳಿಯುತ್ತಿರುವುದನ್ನು ಕಾಣಬಹುದು. ಮೇಲಿನ ಬೇಡಿಕೆ ರೇಖೆ ಸರಳರೇಖೆ. ಬೆಲೆಯ ಬದಲಾವಣೆಗೆ, ಬೇಡಿಕೆ ನಿರ್ದಿಷ್ಟ ಪರಿಮಾಣದಲ್ಲಿ ಬದಲಾಗುವುದನ್ನು ಇದು ವ್ಯಕ್ತ ಪಡಿಸುತ್ತದೆ. ಬೆಣ್ಣೆಯ ಬೆಲೆ ಮತ್ತು ಬೇಡಿಕೆ ಇಂಥ ನಿರ್ದಿಷ್ಟ ಸಂಬಂಧವನ್ನೇ ಹೊಂದಿರಬೇಕೆಂದಿಲ್ಲ. ಏರುಪೇರುಗಳಿದ್ದು ಬೇಡಿಕೆಯ ರೇಖೆ ವಕ್ರರೇಖೆಯಾಗಿರುವುದೂ ಸಾಧ್ಯ. 
	ಅನಭೋಗಿ ಯಾವ ಬೆಲೆಯಲ್ಲಿ ಎಷ್ಟು ಪ್ರಮಾಣ ಕೊಳ್ಳಲು ಇಚ್ಛಿಸುತ್ತಾನೆ ಎನ್ನುವುದನ್ನು ಬೇಡಿಕೆಯ ಅನುಸೂಚಿ ವ್ಯಕ್ತಪಡಿಸಿದರೆ, ನೀಡಿಕೆಯ ಅನುಸೂಚಿ ಉತ್ಪಾದಕ ತಾನು ಉತ್ಪಾದಿಸಿರುವ ವಸ್ತುವನ್ನು ಯಾವ ಬೆಲೆಗೆ ಎಷ್ಟು ಪ್ರಮಾಣದಲ್ಲಿ ಮಾರಲು ಇಚ್ಛಿಸುತ್ತಾನೆ ಎನ್ನುವುದನ್ನು ವ್ಯಕ್ತಪಡಿಸುತ್ತದೆ. 
ಬೆಣ್ಣೆಯ ಬೆಲೆ ಕೆ.ಜಿ.ಗೆ ರೂ.ನಲ್ಲಿ 

ಬೆಣ್ಣೆಯ ನೀಡಿಕೆ ಕೆ.ಜಿ.ಯಲ್ಲಿ

50
....
5

40
....
4

30
....
3

20
....
2

10
....

	ಮೇಲಿನ ಉತ್ಪಾದಕ ನೀಡಿಕೆಯ ಅನುಸೂಚಿಯಿಂದ ನಾವು ಗಮನಿಸುವಂತೆ, ಉತ್ಪಾದಕರು ಯಾವಾಗಲೂ, ಹೆಚ್ಚಿನ ಬೆಲೆಯಲ್ಲಿ ಹೆಚ್ಚಿನ ಪ್ರಮಾಣವನ್ನು ಮಾರಾಟ ಮಾಡಲು ಬಯಸುತ್ತಾರೆ.

	ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅನುಭೋಗಿಗಳು ವಿವಿಧ ಬೆಲೆಗಳಲ್ಲಿ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆಯೇ ಉತ್ಪಾಕದರು ವಿವಿಧ ಬೆಲೆಗಳಲ್ಲಿ ಎಷ್ಟು ಮಾರಾಟಮಾಡಲು ತಯಾರಿರುತ್ತಾರೆ ಎನ್ನುವುದನ್ನೂ ವ್ಯಕ್ತಪಡಿಸುತ್ತಾರೆ. ಇವರಿಬ್ಬರ ನಡುವೆ ಹೊಂದಾಣಿಕೆಯಾದಾಗ ಸಮತೋಲನ ಬೆಲೆ ಏರ್ಪಡುತ್ತದೆ. ಹಿಂದಿನ ಉದಾಹರಣೆಯನ್ನೇ ಗಮನಿಸುವುದಾದರೆ ಅನುಭೋಗಿ, ಕೆಜಿ ಯೊಂದಕ್ಕೆ ರೂ 30 ಇರುವ 3 ಕೆಜಿ ಬೆಣ್ಣೆಯನ್ನು ಬೇಡುತ್ತಿದ್ದಾನೆ. ಉತ್ಪಾದಕ ಕೆಜಿಗೆ ರೂ 30 ಇರುವಾಗಿ 3 ಕೆಜಿ ಬೆಣ್ಣೆಯನ್ನು ಮಾರಾಟ ಮಾಡಲು ತಯಾರಿದ್ದಾನೆ. ಆದ್ದರಿಂದ ರೂ 30 ಎನ್ನುವುದು ಸಮತೋಲನ ಬೆಲೆ ಹಾಗೂ 3 ಕೆಜಿ ಎನ್ನುವುದು ಸಮತೋಲನ ಪ್ರಮಾಣ. ಆದ್ದರಿಂದ ಬೇಡಿಕೆ ಹಾಗೂ ನೀಡಿಕೆ ಅನುಸೂಚಿಗಳು ಯಾವ ಬೆಲೆಯಲ್ಲಿ ಸಮತೋಲನ ಪ್ರಮಾಣ ಏರ್ಪಡುತ್ತವೆ ಎನ್ನುವುದನ್ನೂ ವ್ಯಕ್ತಪಡಿಸುತ್ತವೆ. ಬೇಡಿಕೆ ಮತ್ತು ನೀಡಿಕೆ ರೇಖೆಗಳನ್ನು ನಕ್ಷೆಯ ಮೇಲೆ ಮೂಡಿಸಿ ಸಮತೋಲನ ಬೆಲೆ ಮತ್ತು ಪರಿಮಾಣವನ್ನು ವ್ಯಕ್ತಪಡಿಸಲಾಗಿದೆ. 

ಚಿತ್ರ-2

	ಬೇಡಿಕೆ ಮತ್ತು ನೀಡಿಕೆ ರೇಖೆಗಳು ಎಂಬಲ್ಲಿ ಸಂಧಿಸಿರುವುದನ್ನು ಕಾಣಬಹುದು. ಇದೇ ಸಮತೋಲನ ಬೆಲೆ ಮತ್ತು ಪ್ರಮಾಣ ಮಟ್ಟ, ಬೇರೆ ಎಲ್ಲ ಮಟ್ಟಗಳಲ್ಲೂ ಬೇಡಿಕೆ ಮತ್ತು ನೀಡಿಕೆಗಳ ನಡುವೆ ಅಂತರವಿರುವುದನ್ನು ಗಮನಿಸಬಹುದು. 

	ಬೆಲೆ ಬದಲಾದಂತೆ ಬೇಡಿಕೆ ಮತ್ತು ನೀಡಿಕೆ ಅನಸೂಚಿಗಳು ಬದಲಾಗುವುದು ಸಾಧ್ಯ. ಹೀಗಾದಾಗಲೆಲ್ಲ ಹೊಸ ಹೊಸ ಸಮತೋಲನ ಬೆಲೆ ಮತ್ತು ಪ್ರಮಾಣಗಳು ಉಂಟಾಗುತ್ತವೆ. ಈ ಹೊಸ ಸಮತೋಲನ ಬೆಲೆ ಮತ್ತು ಪ್ರಮಾಣಗಳು ಹಿಂದಿನ ಸಮತೋಲನ ಬೆಲೆ ಪ್ರಮಾಣಗಳಿಗಿಂತ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಮುಖ್ಯವಾಗಿ ಇದು ಬೆಲೆ ಮತ್ತು ಬೇಡಿಕೆಗಳ ಪ್ರಮಾಣಗಳ ವ್ಯತ್ಯಾಸಗಳನ್ನು ಅವಲಂಬಿಸುತ್ತದೆ.

	ಸ್ಪರ್ಧಾತ್ಮಕ ಮಾರುಕಟ್ಟೆಯ ಬೆಲೆ ಇಲ್ಲದ ಸರಕಿನ ಬೆಲೆ ಅದರ ಉತ್ಪಾದನೆಯ ಸ್ವರೂಪ ಮತ್ತು ಅದರ ಬೇಡಿಕೆಗನುಗುಣವಾಗಿ ಬೇರೆ ಬೇರೆ ರೀತಿಯ ಮಾರುಕಟ್ಟೆ ಇರುವುದು ಸಾಧ್ಯ. ಒಂದು ಸರಕು ಏಕಸ್ವಾಮ್ಯ ಮಾರುಕಟ್ಟೆಯಲ್ಲಿ, ಹಲವರ ಸ್ವಾಮ್ಯಉಳ್ಳ ಮಾರುಕಟ್ಟೆಯಲ್ಲಿ, ಕೊಳ್ಳುವವರ ಏಕಸ್ವಾಮ್ಯ ಮಾರುಕಟ್ಟೆಯಲ್ಲಿ ಮಾರಾಟವಾಗಬಹುದು. ಈ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಸರಕಿಗೆ ಬೆಲೆ ನಿರ್ಧಾರ ತತ್ವಗಳು ಬೇರಿ ರೀತಿಯಲ್ಲಾಗಬಹುದಾದರೂ ಮೂಲಭೂತವಾಗಿ ಆ ಸರಕಿನ ಬೇಡಿಕೆ ಮತ್ತು ನೀಡಿಕೆಗಳ ಪ್ರಮಾಣವೇ ಆ ಸರಕಿನ ಬೆಲೆಯನ್ನು ನಿರ್ಧರಿಸುತ್ತವೆ. ಆದ್ದರಿಂದ ಸ್ಪರ್ಧಾತ್ಮಕ ಮಾರುಕಟ್ಟೆಯ ಬೆಲೆ ನಿರ್ಧಾರ ತತ್ತ್ತ್ತ್ವವನ್ನೇ ವಿವಿಧ ಬಗೆಯ ಮಾರುಕಟ್ಟೆ ಬೆಲೆಗಳ ನಿರ್ಧಾರವೂ ಅವಲಂಬಿಸಿರುವುದನ್ನು ಗಮನಿಸಬಹುದು.			
 (ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ